Saturday, January 15, 2011

"ಜುಲೈ ೨೦೦೮" ರ "ಕೇರಳ" ಪ್ರವಾಸ

ಪ್ರಿಯ ಓದುಗೊರೆ,

ನಾನೀಗ ಹೇಳಹೊರಟಿರುವುದು ನನ್ನ "ಜುಲೈ ೨೦೦೮" ರ "ಕರ್ನಾಟಕ - ತಮಿಳುನಾಡು - ಕೇರಳ" ಪ್ರವಾಸದ ಬಗ್ಗೆ :

ನಮ್ಮ ತಂಡ : ನಾನು (ಕೋಣನಕುಂಟೆ), ರಾಕೇಶ್ (ಜಯನಗರ 5 ನೇ ಬ್ಲಾಕ್), ಮಹೇಶ್ (ಚಿಕ್ಕ ಮುದವಾಡಿ, ಕನಕಪುರ), ವಿಜಯ್ (ಕತ್ರಿ ಗುಪ್ಪೆ), ರವಿಂದ್ರ (ಗಾಂಧಿ ನಗರ ,ಕನಕಪುರ ರಸ್ತೆ), ಮಧುಸೂದನ್(ಎಸ್.ಪಿ.ರೋಡ್), ಯಶವಂತ್ (ಕತ್ರಿ ಗುಪ್ಪೆ) ಮತ್ತು ಪವನ್ (ಕತ್ರಿ ಗುಪ್ಪೆ) ಹಾಗೂ ಕಾರ್ ಡ್ರೈವರ್ : ಚಂದ್ರು (ಬಯ್ಯನ ಪಾಳ್ಯ, ಕನಕಪುರ ರಸ್ತೆ)
ವಾಹನ : ಟೊಯೋಟ ಕ್ವಾಲಿಶ್
ಪ್ರವಾಸದ ದಿನಾಂಕ : 11-ಜುಲೈ-2009 ಯಿಂದ 22-ಜುಲೈ-2009 ವರೆಗೆ (12 ದಿನಗಳು)
ಒಟ್ಟು ಪ್ರಯಾಣಿಸಿದ ದೂರ : 3320 ಕಿಲೋ ಮೀಟರ್
ಸ್ಥಳಗಳು : ನಾಗರಹೊಳೆ, ಇರ್ಪು ಫಾಲ್ಸ್, ತಿರುವನಲ್ಲಿ, ವೇ ನಾಡು, ಕುರುವ ಐಲ್ಯಾಂಡ್, ಎಡಕಲ್ ಕೇವ್ಸ್, ಚಾಮರ ಪೀಕ್, ಊಟಿ, ಕೊನ್ನೂರು (Sleeping Lady, Lamb's Rock, Dolphin Nose, Tea Estates), ಸೈಲೆಂಟ್ ವ್ಯಾಲಿ, ಚಿಣ್ಣರ್ ಘಾಟ್, ಪೆರಂಬಿಕುಲಂ, ಮುನ್ನಾರ್, ತೇಕಡಿ, ಕನ್ಯಾಕುಮಾರಿ, ಕೋವಲಂ ಬೀಚ್, ಕೊಲ್ಲಂ ಬೀಚ್, ಅಲಿಪ್ಪೆ, ಮದುರೈ, ಗುರುವಾಯುರ್, ಮಂಗಳೂರು, ಉಡುಪಿ, ಧರ್ಮಸ್ಥಳ, ಶೃಂಗೇರಿ, ಹೊರನಾಡು, ಕುಕ್ಕೆ ಸುಭ್ರಮಣ್ಯ, ಕುದುರೆಮುಖ, ಆಗುಂಬೆ
ಊಟದ ವ್ಯವಸ್ಥೆ : ಪ್ರತಿ ದಿನವೂ ಒಬ್ಬೊಬ್ಬರದು (ಬೆಳಗಿನ ತಿಂಡಿ + ಮಧ್ಯಾನದ ಊಟ + ರಾತ್ರಿ ಊಟ + ಸ್ನಾಕ್ಸ್ + ಇತ್ಯಾದಿ)

ನಾವೆಲ್ಲರೂ ಇಂಜಿನಿಯರಿಂಗ್ ವಿಧ್ಯಾರ್ಥಿಗಳು. ನಾವೆಲ್ಲರೂ ಈ ಪ್ರವಾಸಕ್ಕಾಗಿ ಸುಮಾರು ಮೂರು ತಿಂಗಳ ಹಿಂದಿನಿಂದಲೇ ಪ್ಲಾನ್ ಮಾಡಿದ್ದೆವು. (ನಾನು & ವಿಜಯ್ :- ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಸಂಗ್ರಹ, ರಾಕೇಶ್ :- ಕಾರ್ ಬುಕ್ ಮಾಡೋದು, ಮಹೇಶ್ :- 11-ಜುಲೈ-2009 ರ ರಾತ್ರಿ ಭೋಜನ ವ್ಯವಸ್ಥೆ ನಮ್ಮೆಲ್ಲರ ಜವಾಬ್ದಾರಿಗಳಾಗಿದ್ದವು.) ನಮ್ಮೆಲ್ಲರ ಸೆಮೆಸ್ಟರ್ ಪರೀಕ್ಷೆಗಳು 11-ಜುಲೈ-2009 ರಂದು ಮುಗಿಯುತ್ತದೆಂದು ಖಚಿತಪಡಿಸಿಕೊಂಡ ನಂತರ ನಾವೆಲ್ಲರೂ 11-ಜುಲೈ-2009 ರ ಸಂಜೆ ಪ್ರವಾಸ ಹೊರಡಲು ತೀರ್ಮಾನಿಸಿದೆವು. ಅದಕ್ಕಾಗಿ ರಾಕೇಶ್ ಟೊಯೋಟ ಕ್ವಾಲಿಶ್ ಬುಕ್ ಮಾಡಿದ್ದ.

11-ಜುಲೈ-2009 ರಂದು ಸಮಯ ಸುಮಾರು 4:00pm ಘಂಟೆ. ರಾಕೇಶ್ ನನಗೆ ಫೋನ್ ಮಾಡಿ "ನೀನು ಬೇಗ ರೆಡಿಯಾಗಿ, 5:00pm ಹೊತ್ತಿಗೆ ಕೋಣನಕುಂಟೆ ಕ್ರಾಸ್ಗೆ ಬಾ. ನಾನೂ ಕೂಡ ಅಲ್ಲಿಗೆ ಬರ್ತೀನಿ. ಕಾರು ಅಲ್ಲಿಗೇ ಬರುತ್ತೆ." ಎಂದು ತಿಳಿಸಿದ. ಅದರಂತೆ ನಾನು 5:00pm ಘಂಟೆಗೆ ಕೋಣನಕುಂಟೆ ಕ್ರಾಸ್ಗೆ ಬಂದು ರಾಕೇಶ್ ಮತ್ತು ಕಾರಿಗಾಗಿ ಕಾಯುತಿದ್ದೆ. ರಾಕೇಶ್ ಐದತ್ತು ನಿಮಿಷ ತಡವಾಗಿ ಬಂದ, ನಂತರ ನಾವಿಬ್ಬರು ಅಲ್ಲೇ ಕಾರಿಗಾಗಿ ಕಾಯುತಿದ್ದೆವು. ಸಂಜೆ 6:00pm ಘಂಟೆಯಾದರೂ ಕಾರ್ ಬರಲಿಲ್ಲ. ಆಗಾಗ್ಗೆ ಚಂದ್ರು (ಕಾರ್ ಡ್ರೈವರ್) ಗೆ ಫೋನ್ ಮಾಡಿ ವಿಚಾರಿಸುತಿದ್ದೆವು. ಆತ "ಆನ್ ದಿ ವೇ ಬರ್ತಿದ್ದೀನಿ. ಟ್ರಾಫಿಕ್ ಜಾಮ್ ಇದೆ ಇಲ್ಲಿ. ಅದರಿಂದ ಲೇಟಾಗ್ತಿದೆ." ಎಂದು ಸಮಜಾಯಿಸಿ ನೀಡುತಿದ್ದ. ಆ ವೇಳೆಗಾಗಲೇ ನನ್ನ ಮತ್ತು ರಾಕೇಶ್ ನ ಮೊಬೈಲಿನಲ್ಲಿ ವಿಜಯ್, ಮಹೇಶ್, ಮಧು ಮತ್ತು ರವಿಂದ್ರರ ಮೊಬೈಲ್ ಕರೆಗಳು "ಏನ್ರೋ...ಇನ್ನೂ ಎಲ್ಲಿದ್ದೀರಾ..??? ಬರ್ತಿದ್ದಿರೋ... ಇಲ್ವೋ..??? ನಾವು ನಿಮಗೋಸ್ಕರ ಕಾಯುತ್ತೀದ್ದೀವಿ.. ಇನ್ನೋ ಎಸ್ತೋತಾಗುತ್ತೆ..??? " ಎಂದು ಕೇಳುತಿದ್ದವು. ಅದಕ್ಕೆ ನಾವು ಕೂಡ "ಇನ್ನೊಂದ್ ಅರ್ಧ ಘಂಟೆಯಲ್ಲಿ ಅಲ್ಲಿರ್ತೀವಿ ಕಣ್ರೋ..." ಎಂದು ಸಮಜಾಯಿಸಿ ನೀಡಿ ಸುಮ್ಮನಾಗುತ್ತಿದ್ದೆವು . ಸುಮಾರು 6:00pm - 7:00pm ಗೆ ಕಾರ್ ಬಂತು. ಆದ್ರೆ ಇನ್ನೋ "DVD Player" ಫಿಕ್ಸ್ ಮಾಡಿರಲಿಲ್ಲ, ಆತ ನಾವೀಗ ಜೆ.ಸಿ.ರೋಡ್ ಗೆ ಹೋಗಿ "DVD Player" ಫಿಕ್ಸ್ ಮಾಡಿಸ್ಕೊಂಡು ಹೋಗೋಣ ಎಂದ.... ಅದಕ್ಕೆ ನಾವೂ ಒಪ್ಪಿ, ಜೆ.ಸಿ.ರೋಡ್ಗೆ ಹೋದೆವು. ಅಲ್ಲಿ "DVD Player" ಫಿಕ್ಸ್ ಮಾಡಿಸಿ ಹೊರಡುವಸ್ಟರಲ್ಲಿ 8:45pm ಆಗಿತ್ತು. ಮಧ್ಯೆ ಮಹೇಶ ನಮಗೆ ಕಾಲ್ ಮಾಡಿ "ಮಗ ನಮ್ಮನೆಯಲ್ಲಿ... ಚಿಕೆನ್ ಬಿರ್ಯಾನಿ (Non Veg) ಮತ್ತೆ ತಿಳಿ ಸಾಂಬಾರ್ (Veg) ಮಾಡಿಸಿ ಕಾಯುತ್ತಿದ್ದೇನೆ... ಇನ್ನೋ ಎಲ್ಲಿದ್ದೀರಾ ...???? 9:30pm ವಸ್ಟರಲ್ಲಿ ಬರ್ತೀವಿ ಅಂತ ಹೇಳಿದ್ರಿ ..???" ಎಂದು ಕೇಳುತ್ತಿದ್ದ. ನಂತರ ನಾವು ಎಸ್.ಪಿ.ರೋಡಿಗೆ ಹೋಗಿ "ಮಧುಸೂದನ್" ಪಿಕ್ ಅಪ್ ಮಾಡಿದೆವು. ಆಮೇಲೆ ಕತ್ರಿಗುಪ್ಪೆಗೆ ಹೋಗಿ "ವಿಜಯ್, ಪವನ್ ಮತ್ತು ಯಶವಂತ್" ರನ್ನು ಪಿಕ್ ಅಪ್ ಮಾಡಿ ಕನಕಪುರ ರಸ್ತೆಯಲ್ಲಿ ಹೊರಟೆವು. ಲಕ್ಷ್ಮೀಪುರದಲ್ಲಿ (ಕನಕಪುರ ರಸ್ತೆ) ಶನಿದೇವರ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ನಂತರ ಅಲ್ಲಿಂದ ಹೊರಟು ಗಾಂಧಿ ನಗರದಲ್ಲಿ "ರವಿಂದ್ರ" ನನ್ನು ಪಿಕ್ ಅಪ್ ಮಾಡಿ ಕನಕಪುರದತ್ತ ಹೊರಟೆವು.



ನಂತರ ಕನಕಪುರದಲ್ಲಿ ರೈಟ್ ಟರ್ನ್ ತೆಗೆದುಕೊಂಡು ಚಿಕ್ಕಮುದವಾಡಿಯತ್ತ ಮುನ್ನಡೆದೆವು ಆಗ ಸಮಯ ಸರಿ ಸುಮಾರು 12:00pm ಘಂಟೆ. ಚಿಕ್ಕಮುದವಾಡಿಯ ಮುಖ್ಯ ರಸ್ತೆಯಲ್ಲೇ ಮಹೇಶ "ಗ್ರಾಮ ಸಿಂಹಗಳೊಡನೆ (ಮಧ್ಯ ರಾತ್ರಿಯಾಗಿದ್ದುದ್ದರಿಂದ್ದ)" ನಮ್ಮನ್ನು ಬರಮಾಡಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋದ. ಪಾಪ (12:00pm) ಅವರ ಮನೆಯಲ್ಲಿ ಅವನ ಅಪ್ಪ, ಅಮ್ಮ ಕೂಡ ಮಲಗದೇ ನಮಗೋಸ್ಕರ ಕಾಯುತ್ತಿದ್ದರು. ನಾವು ಅವರ ಮನೆಯಲ್ಲೇ ಊಟ ಮುಗಿಸಿದೆವು ನಂತರ ನಾವು ಅಲ್ಲಿಂದ ಮೈಸೂರು ಕಡೆಗೆ ಹೊರಟು ಅನಂತರ ನಾಗರಹೊಳೆ ಚೆಕ್ ಪೋಸ್ಟ್ ತಲುಪಿದೆವು. ಆಗ ಸಮಯ 4:00am ಆಗಿದುದ್ದರಿಂದ ನಾಗರಹೊಳೆ ಅಭಯಾರಣ್ಯದ ಪ್ರವೇಶ ನಿಷೇಧಿಶಲಾಗಿತ್ತು (ಪ್ರವೇಶ ಸಮಯ :- 6:00am ಯಿಂದ 5:00pm ವರೆಗೆ). ನಾವು ಅಲ್ಲೇ ಚೆಕ್ ಪೋಸ್ಟ್ ಹತ್ತಿರ ಕಾರನ್ನು ನಿಲ್ಲಿಸಿ ಕೆಳಗಿಳಿದರೆ ಕೊರೆಯುವ ಚಳಿ ಮತ್ತು ಗಾಳಿ. ಅದೊಂದು ರೋಮಾಂಚನಕಾರಿ ಅನುಭವ. ಮತ್ತೆ ನಾವೆಲ್ಲಾ ಕಾರಿನಲ್ಲೇ ಬೆಳಿಗ್ಗೆ 6:00am ವರೆವಿಗೂ "D-War" ಸಿನಿಮಾ ನೋಡುತ್ತಾ ಹಾಗೂ ಹರಟುತ್ತಾ ಸಮಯ ಕಳೆದೆವು.

ಆಗ ಸಮಯ ಬೆಳಿಗ್ಗೆ 6:00am ನಾಗರಹೊಳೆ ಚೆಕ್ ಪೋಸ್ಟ್ ಕಾವಲುಗಾರ, ಅಭಯಾರಣ್ಯದ ಗೇಟ್ ತೆಗೆದ.



ಮಳೆಗಾಲವಾದ್ದರಿಂದ ತುಂಬಾ ಚಳಿ ಹಾಗೂ ಕೆಲವೊಮ್ಮೆ ತುಂತುರು ಮಳೆ ಬರುತಿತ್ತು. ನಾವು ನಾಗರಹೊಳೆ ಪ್ರವೇಶಿಸಿದ ತಕ್ಷಣ ಎತ್ತ ನೋಡಿದರೂ ಹಸಿರು, ಗಿಡ, ಮರಗಳ ಎಲೆಗಳಲ್ಲಿಂದ ಉದುರುತ್ತಿರುವ ಮಳೆ ನೀರಿನ ಹನಿಗಳು ನಮ್ಮನ್ನು ರೋಮಾಂಚನಗೊಳಿಸುವುದರೊಂದಿಗೆ ಅಲ್ಲಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಆನೆಗಳ ಸಗಣಿ ನಮ್ಮನ್ನು "ಆನೆಗಳು ತುಂಬಾ ಇವೆ. ಈಗ ತಾನೇ ರಸ್ತೆ ದಾಟಿದೆ. ಇಲ್ಲೇ ಎಲ್ಲೋ ಹತ್ತಿರದಲ್ಲೇ ಇದೆ." ಎಂಬ ಹತ್ತಾಲವಾರು ಯೋಚನೆಗಳಲ್ಲಿ ಮುಳುಗಿಸಿತ್ತು. ಹೀಗೆ ಮುನ್ನಡೆಯುವಾಗ, ಮಾರ್ಗ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ಕೆಲವೊಂದು ಫೋಟೋ ಕ್ಲಿಕ್ಕಿಸಿದೆವು (ನಾಗರಹೊಳೆ ಅಭಯಾರಣ್ಯದ ಸೂಚನೆ :- "ವನ್ಯ ಜೀವಿಗಳು ಹೇರಳವಾಗಿ ವಾಸಿಸುತ್ತಿರುವುದರಿಂದ ಯಾರೂ ಕಾಡಿನ ಮಾರ್ಗ ಮಧ್ಯದಲ್ಲಿ ಇಳಿಯಬಾರದು"). ನಾವು ಹತ್ತದಿನೈದು ನಿಮಿಷ ಅಲ್ಲೇ ಹರಟಿ ಮುನ್ನಡೆದೆವು.







ಮುಂದೆ ನಾವು "ಮೂರ್ಕಾಲು" ಎಂಬ ಕಾಡಿನ ಮಧ್ಯೆ ಇರುವ ಹಳ್ಳಿ ತಲುಪಿದೆವು. ಇದೊಂದು ಸಣ್ಣ ಹಳ್ಳಿ, ಇಲ್ಲಿ ಪೋಸ್ಟ್ ಆಫೀಸ್, ಜಂಗಲ್ ಲಾಡ್ಜ್, ಪುಟ್ಟ ಮನೆಗಳು ಮತ್ತು "ಆನೆ ಶಿಬಿರ" ನೋಡಬಹುದು. ನಾವು ಅಲ್ಲೇ ಕಾರು ನಿಲ್ಲಿಸಿ ಆನೆ ಶಿಬಿರದತ್ತ ನಡೆದೆವು. ಇಲ್ಲಿ ಕಾಡು ಆನೆಗಳನ್ನು ಪಳಗಿಸುತ್ತಾರೆ. ನಾವಲ್ಲಿಗೆ ಹೋದಾಗ ಎಲ್ಲಾ ಮಾವುತರು ಇನ್ನೋ ಮಲಗಿದ್ದರು. ನಾವು ನಿಧಾನವಾಗಿ ಆನೆಗಳನ್ನು ಪಳಗಿಸಲು ಬಳಸುವಲ್ಲಿಗೆ ನಡೆದೆವು. ನಂತರ ಮಾವುತರು ನಮ್ಮ ಹರತುವಿಕೆಯನ್ನು ಗಮನಿಸಿ ನಮ್ಮತ್ತ ಬಂದು ಆ ಆನೆಗಳ ಬಗ್ಗೆ ವಿವರಿಸಲಾರಮಭಿಸಿದರು.









ಅಲ್ಲಿ ನಾವು ಕೆಲವೊಂದು ಫೋಟೋಗಳನ್ನು ತೆಗೆದು ಅಲ್ಲಿಂದು ಮುನ್ನಡೆದೆವು. ಮೂರ್ಕಾಲು ಸಿಗುವವರೆವಿಗೂ ನಾವು ಯಾವುದೇ ಪ್ರಾಣಿಗಳನ್ನು ನೋಡಿರಲಿಲ್ಲ ಆದರೆ ಮೂರ್ಕಲು ಹಳ್ಳಿಯ ನಂತರ ನಾವು "ಜಿಂಕೆಗಳ ಹಿಂಡು" ಕಂಡೆವು.











ಆಗೇ ಮುಂದೆ "ನವಿಲುಗಳು", "ಕಾಡೆಮ್ಮೆಗಳ ಹಿಂಡು" ಕಂಡೆವು.





ಹಾಗೆ ಮುನ್ನಡೆಯಲು ಒಂಟಿ ಸಲಗವೊಂದನ್ನು ರಸ್ತೆಯಲ್ಲೇ ಕಂಡು ಗಾಬರಿಯಾದೆವು. ಅಲ್ಲೇ ಕಾರು ನಿಲ್ಲಿಸಿ ಫೋಟೋ ತೆಗೆಯಲಾರಂಭಿಸಿದೆವು .ಇಲ್ಲಿಯ ತನಕ ಫೋಟೋ ತೆಗೆಯಲು ಕಾರಿಂದ ಕೆಳಗಿಳಿಯಲು ಭಯ ಬೀಳುತ್ತಿದ್ದ "ರಾಕೇಶ್" ಇದ್ದಕ್ಕಿದ್ದಂತ್ತೆ ಕಾರಿಂದ ಕೆಳಗಿಳಿದು ಫೋಟೋ ತೆಗೆಯಲಾರಂಭಿಸಿದ. ಆ ಸಮಯಕ್ಕೆ ಸರಿಯಾಗಿ ಆ ಆನೆ ನಮ್ಮೆಡೆಗೆ ತಿರುಗಿತು. ಕೂಡಲೇ ರಾಕೇಶ್ ಗಾಬರಿಯಿಂದ ಓಡಿ ಬಂದು ಕಾರಿನಲ್ಲಿ ಕುಳಿತ. ನಂತರ ಆನೆ ನಮ್ಮೆಡೆಗೆ ನಿಧಾನವಾಗಿ ಬರಲಾರಂಭಿಸಿತು ಕೂಡಲೇ ಡ್ರೈವರ್ ಕಾರು ಸ್ಟಾರ್ಟ್ ಮಾಡಿ ಹಿಂದೆ - ಮುಂದೆ ಚಲಿಸಲಾರಂಭಿಸಿದ. ಇದನ್ನು ನೋಡಿ ಮತ್ತಷ್ಟು ಕೋಪಗೊಂಡ ಆಸಲಗ ನಮ್ಮೆಡೆಗೆ ಓಡಿ ಬರಲಾರಂಭಿಸಿತು. ಇದನ್ನು ನೋಡಿ ಗಾಬರಿಗೊಂಡ ನಾವೆಲ್ಲರೂ "ಚಂದ್ರು (ಕಾರ್ ಡ್ರೈವರ್) ನಡೀರಿ ಬೇಗ...ಅದು ನಮ್ಮ ಕಡೆನೇ ಬರ್ತಿದೆ..." ಎಂದೂ, ಮಹೇಶ್ "ಚಂದ್ರು ಬೇಗ ನಡಿಯಪ್ಪ....ಬದುಕಿದ್ರೆ ಮತ್ತೆ ಬರಬಹುದು.....ಆ ಆನೆಗೆ ನಮ್ಮ ಕಾರು ಯಾವ ಲೆಕ್ಕ...." ಎಂದು ಚೀರಲು ಡ್ರೈವರ್ ಅಲ್ಲಿಂದ ಮುಂದೆ ಚಲಿಸಿದ. ಇದೊಂದು ನಮ್ಮ ಜೀವನದಲ್ಲಿ ನಾವೆಂದೂ ಮರೆಯಲಾಗದ ಘಟನೆ. ಆ ಒಂದು ಸನ್ನಿವೇಶವನ್ನು ಬರಹದಲ್ಲಿ ವ್ಯಕ್ತಪಡಿಸುವುದಕ್ಕಿಂತ ಅನುಭವಿಸಿ ನೋಡಬೇಕೆಂಬುದು ನನ್ನ ಅಭಿಪ್ರಾಯ.





ನಾವು ನಂತರ ನಾಗರಹೊಳೆ ಅಭಯಾರಣ್ಯದಿಂದ ಹೊರನಡೆದು "ಕುಟ್ಟ" ತಲುಪಿದೆವು.









ನಾವು ಕುಟ್ಟದಲ್ಲಿ ಬೆಳಗಿನ ತಿಂಡಿ (ಇಡ್ಲಿ, ದೋಸೆ, ಪೂರಿ, ಕಾಫಿ, ಟೀ) ಮುಗಿಸಿ, ಸ್ವಲ್ಪ ಹೊತ್ತು ಸಮಯ ಕಳೆದು, ಮೊಬೈಲ್ ಬ್ಯಾಟರಿಗಳನ್ನು ರಿಚಾರ್ಜ್ ಮಾಡಿಕೊಂಡು "ಇರ್ಪು ಜಲಪಾತ"ದತ್ತ ನಡೆದೆವು.





ಆಗ ಮಳೆಗಾಲವಾದ್ದರಿಂದ ಜಲಪಾತ ತುಂಬಿ ಹರಿಯುತಿತ್ತು.





ನಾವು ಅಲ್ಲೇ ಸ್ನಾನ ಮುಗಿಸಿ....ಸ್ವಲ್ಪ ಸಮಯ ಕಳೆದೆವು. ಆಗ ಬೆಳಗಿನ ಜಾವವಾದ್ದರಿಂದ ಕೊರೆಯುವ ಚಳಿ, ಆಗಾಗ ತುಂತುರು ಮಳೆ...ಅದೊಂದು ವಿಷ್ಮಯ ಲೋಕವೇ ಸರಿ.

ಆಮೇಲೆ ನಾವು "ಇರ್ಪು ಜಲಪಾತ"ದಿಂದ "ತಿರುವನಲ್ಲಿ"ಗೆ ಹೊರಟೆವು. ರಸ್ತೆಯುದ್ದಕ್ಕೂ ದಟ್ಟ ಕಾಡು, ಎತ್ತ ನೋಡಿದರೂ ಬಿದಿರು-ಮೆಳೆ ಭಯ ಹುಟ್ಟಿಸುವಂತಿತ್ತು. ನಂತರ ನಾವು ಆ ದಟ್ಟ ಕಾಡು, ಬೆಟ್ಟಗಳನ್ನು ಮೀರಿ "ತಿರುವನಲ್ಲಿ ದೇವಸ್ಥಾನ" ತಲುಪಿದೆವು. ರಾಕೇಶ್ ಮತ್ತು ಮಹೇಶ್ ಮಾತ್ರ ಚಳಿ ಮಳೆಗೆ ಹೆದರಿ ಕಾರಿನಲ್ಲೇ ಕುಳಿತಿದದ್ದರು. ಉಳಿದ ನಾವೆಲ್ಲರೂ ಆ ದೇವಸ್ಥಾನಕ್ಕೆ ಹೋಗಿ ಸುತ್ತಾಡಿ ಎಂಜಾಯ್ ಮಾಡಿದೆವು. ನಾವಲ್ಲಿ ಹಿಂದಿನ ಕಾಲದ ಕೊಳವೆ ತರಹ ಕಲ್ಲಿನಿಂದ ಮಾಡಿದ ವಸ್ತುಗಳನ್ನು ಕಾಣಬಹುದು. ಆಗಿನ ಕಾಲದಲ್ಲಿ ಇದರ ಮೂಲಕ ಎಲ್ಲೆಡೆಗೆ ನೀರನ್ನು ಹಾಯಿಸುತಿದ್ದರಂತೆ. ದೇವಸ್ಥಾನದ ಸುತ್ತಾ ದಟ್ಟ ಕಾಡು, ಅಚ್ಹ ಹಸಿರಿನಿಂದ ಕೂಡಿದ ಬೆಟ್ಟ...ಆಗಾಗ ಸೂರ್ಯನ ಕಿರಣಗಳು ಆ ಗಿಡ-ಮರಗಳನ್ನು ಚುಂಬಿಸುವ ದೃಶ್ಯ ನಮ್ಮನ್ನು ಮನಸೂರೆಗೊಂಡಿತ್ತು.









ಅನಂತರ ನಾವು ಅಲ್ಲಿಂದ "ಸುಲ್ತಾನ್ ಬತ್ತೇರಿ"ಗೆ ಹೊರಟೆವು.





ನಾವು ಸುಲ್ತಾನ್ ಬತ್ತೇರಿ ತಲುಪಿದಾಗ ಮಧ್ಯನಾವಾಗಿತ್ತು. ಅಲ್ಲೇ ಸ್ವಲ್ಪ ಜನರನ್ನು ವಿಚಾರಿಸಿ "ಕುರುವ ಐಲ್ಯಾಂಡ್"ಗೆ ಹೋಗುವ ದಾರಿ ತಿಳಿದುಕೊಂಡು ಕುರುವ ಐಲ್ಯಾಂಡ್ ಕಡೆಗೆ ನಡೆದೆವು. "ಕುರುವ ಐಲ್ಯಾಂಡ್"ನಲ್ಲೆ ಮಧ್ಯಾನದ ಭೋಜನ ಮಾಡುವ ಪ್ಲಾನ್ ಮಾಡಿದ್ದೆವು. "ಕುರುವ ಐಲ್ಯಾಂಡ್" ತಲುಪಿದ ನಂತರ ಊಟಕ್ಕೆ ಹೋಟೆಲ್ ಹುಡುಕಿದರೆ, ಯಾವ ಹೋಟೆಲ್ ಕೂಡ ಇಲ್ಲ. ಕೊನೆಗೆ ಯಾವುದೊ ಒಂದು ಹೋಟೆಲ್ನಲ್ಲಿ ವಿಚಾರಿಸಲು ಊಟ ಖಾಲಿಯಾಗಿತ್ತು ಮತ್ತೇನೂ ಮಾಡಲು ತೋಚದೆ ಕೆಲವು ಸ್ನಾಕ್ಸ್ ತಿಂದು, ಟೀ-ಕಾಫಿ ಕುಡಿದು, ಸುಲ್ತಾನ್ ಬತ್ತೇರಿಯಲ್ಲೇ ಊಟ ಮಾಡೋಣವೆಂದು ನಿರ್ಧರಿಸಿ ಕೆಲಹೊತ್ತು ಕಳೆದೆವು. ಕುರುವ ಐಲ್ಯಾಂಡ್ನಲ್ಲಿ "ರಿವರ್ ರಾಫ್ಟಿಂಗ್" ಸೌಲಭ್ಯ ಕೂಡ ಇದೆ. ಆದರೆ ನಾವು ರಿವರ್ ರಾಫ್ಟಿಂಗ್ ಮಾಡ್ಲಿಲ್ಲ.



ಅಲ್ಲೇ ಸುತ್ತಾಡಿ ನಂತರ "ಸುಲ್ತಾನ್ ಬತ್ತೇರಿ"ಗೆ ಹೊರಟೆವು.

ಆ ಹೊತ್ತಿಗೆ "ಸುಲ್ತಾನ್ ಬತ್ತೇರಿ"ಯಲ್ಲಿ ತುಂಬಾ ಮಳೆ ಬರುತಿತ್ತು. ಆದ್ದರಿಂದ ನಾವು ಅಲ್ಲೇ ಮಧ್ಯಾನದ ಊಟ (ಪಲಾವ್, ಚಿಕನ್ ಬಿರಯಾನಿ) ಮುಗಿಸಿದೆವು. ನಮಗಂತೂ ಊಟ ಇಷ್ಟವಾಗಲಿಲ್ಲ, ಇನ್ನೇನು ಮಾಡೋಕಾಗೊಲ್ಲ ಬೇರೆ ದಾರಿ ಇಲ್ಲ. ಅಷ್ಟರಲ್ಲಿ ಮಳೆ ನಿಂತಿತ್ತು. ನಂತರ ನಾವು "ಸುಲ್ತಾನ್ ಬತ್ತೇರಿ"ಯಿಂದ "ಎಡೆಕಲ್ ಕೇವ್ಸ್"ನತ್ತ ಹೊರಟೆವು. ನಾವು "ಎಡೆಕಲ್ ಕೇವ್ಸ್" ತಲುಪಿದಾಗ ಸಂಜೆ 5:00pm. ಅಲ್ಲೇ ಸ್ವಲ್ಪ ಸಮಯ ವ್ಯಯಿಸಿ ಅಲ್ಲಿಂದ "ಚಾಮರ ಪೀಕ್"ನತ್ತ ಹೊರಟೆವು.

ನಂತರ "ಚಾಮರ ಪೀಕ್" ತಲುಪುವ ಮುಂಚೆ ಯಾವುದೋ ಒಂದು ಸಿಟಿ ಸಿಕ್ಕಿತು. ಅಲ್ಲಿ ಕಾರು ನಿಲ್ಲಿಸಿ ಕಾಫಿ-ಟೀ ಕುಡಿದೆವು. ಅದೃಷ್ಟವಸಾತ್ ಅಲ್ಲಿ ನಮಗೊಬ್ಬ "ಕನ್ನಡಿಗ" ಸಿಕ್ಕಿದ. ಕರ್ನಾಟಕ ಬಿಟ್ಟ ನಂತರ ಇಲ್ಲಿಯವರೆವಿಗೂ ತಮಿಳುನಾಡಿನಲ್ಲಿ ನಮಗೆ ಯಾರೂ ಕನ್ನಡದವರೇ ಸಿಕ್ಕಿರಲಿಲ್ಲ. ಯಶವಂತ್ಗೆ ಸ್ವಲ್ಪ ತಮಿಳ್ ಭಾಷೆ ಬರುತಿದ್ದರಿಂದ ಹೇಗೋ ನಿಬಾಯಿಸುತಿದ್ದೆವು. ಆತ "ಮಳೆಗಾಲವಾದ್ದರಿಂದ ತುಂಬಾ ಜಿಗಣೆಗಳ ಕಾಟ...ಅದೂ ಅಲ್ಲದೆ ಈಗ ಈ ಸಮಯದಲ್ಲಿ ಅಲ್ಲಿಗೆ ಬಿಡುವುದಿಲ್ಲ" ಎಂದು ತಿಳಿಸಿದ. ನಾವು ಅಲ್ಲಿಂದ "ವೇ-ನಾಡು" ಕಡೆಗೆ ಹೊರಟೆವು.

ನಾವು "ವೇ-ನಾಡು" ಚೆಕ್ ಪೋಸ್ಟ್ ತಲುಪಿದಾಗ ಸಂಜೆ ಆಗಿತ್ತು. "ವೇ-ನಾಡು" ಒಂದು ನೋಡಲೇಬೇಕಾದ ಸ್ಥಳ, ದಟ್ಟ ಕಾಡು, ಮತ್ತೆ ಕಾಡಿನ ಮಧ್ಯೆ ಒಂದು ನದಿ, ಎತ್ತ ನೋಡಿದರೂ ಹಸಿರಿನಿಂದ ಕಂಗೊಳಿಸುವ ಮರ-ಗಿಡಗಳು. ನಾವಂತೂ ತುಂಬಾ ಎಂಜಾಯ್ ಮಾಡಿದೆವು (ವಿಜಯ್ನನ್ನು ಹೊರತುಪಡಿಸಿ - ಕಾರಣ : "ಸುಲ್ತಾನ್ ಬತ್ತೇರಿ" ಮಧ್ಯಾನದ ಚಿಕ್ಕೆನ್ ಬಿರ್ಯಾನಿ ಪ್ರಭಾವ). ಅನಂತರ ನಾವು ವೇ-ನಾಡಿನಿಂದ "ಊಟಿ"ಯತ್ತ ರಾತ್ರಿಯಲ್ಲೇ ಹೊರಟೆವು.

ರಾತ್ರಿಯ ಸಮಯ "ಊಟಿ"ಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ "ಚಿರತೆ"ಯೊಂದನ್ನು ಕಂಡು ಪ್ರವಾಸ ಸಾರ್ಥಕ ಎಂದುಕೊಂಡೆವು. ಅಂದು ರಾತ್ರಿಯೆಲ್ಲಾ ಕಾರಿನಲ್ಲಿ ಅದೇ ಮಾತು. ಆಗ ಸಮಯ ಸುಮಾರು 11:45pm, ನಾವು ಗೂಡ್ಲೂರು ಮಾರ್ಗವಾಗಿ ಊಟಿಗೆ ತೆರಳುವಾಗ ದಟ್ಟ ಮಂಜು ರಸ್ತೆಯನ್ನು ಆವರಿಸಿದ್ದರಿಂದ ಡ್ರೈವರ್ ಮಾರ್ಗ ಮಧ್ಯದಲ್ಲಿ ಕಾರು ನಿಲ್ಲಿಸಿ, ಬೆಳಗಿನ ಜಾವದವರೆಗೆ ಇಲ್ಲೇ ಇದ್ದು ನಾಳೆ ಬೆಳಿಗ್ಗೆ ಹೊರಡೋಣವೆಂದು ತಿಳಿಸಿದ. ಅದೊಂದು ಸಣ್ಣ ಊರು, ಆ ಊರಿನ ಹೆಸರು ನೆನಪಿಲ್ಲ ಆದರೆ ಅಲ್ಲಿಂದ ಊಟಿಗೆ ಸುಮಾರು 35km ಇತ್ತು.





ಆಮೇಲೆ ಬೆಳಿಗ್ಗೆ ಅಲ್ಲೇ ಪಕ್ಕದಲಿದ್ದ "ಟೀ ಅಂಗಡಿಯಲ್ಲಿ" ಟೀ ಕುಡಿದು ಅಲ್ಲಿ ಕೆಲವೊಂದು ಫೋಟೋಗಳನ್ನು ಕ್ಲಿಕ್ಕಿಸಿ ಊಟಿಯತ್ತ ಮುನ್ನಡೆದೆವು.

ನಾವು ಬೆಳ್ಳಂಬೆಳಿಗ್ಗೆ ಊಟಿ ತಲುಪಿದ ನಂತರ ಅಲ್ಲಿಂದ "ದೊಡ್ಡ ಬೆಟ್ಟ"ದ ಕಡೆ ಹೊರಟೆವು. ಅಲ್ಲಂತೂ ತುಂಬಾ ಮಂಜು, ಬಿರುಗಾಳಿ, ಜೊತೆಗೆ ಆಗಾಗ ಸಣ್ಣದಾಗಿ ಮಳೆ....ಎದುರಿನ ವ್ಯಕ್ತಿ ಕೂಡ ಕಾಣುತ್ತಿರಲಿಲ್ಲ ಅಷ್ಟೊಂದು ಮಂಜು. ಅದೊಂದು ಅವಿಸ್ಮರಣೀಯ ಸಮಯ / ಸ್ಥಳ.... ಅಲ್ಲಿ ಆ ಚಳಿಯಲ್ಲಿ "ಮಸಾಲೆ ಕಡಲೇಕಾಯಿ", "ಪಾಪ್-ಕಾರ್ನ್" ಹಾಗೂ ಐಸ್-ಕ್ರೀಂ ತಿಂದು ಆ ಕ್ಷಣವನ್ನು ಮತ್ತಷ್ಟು ರೋಮಾಂಚನಕಾರಿಯಾಗಿ ಕಳೆದೆವು. ನಾನು ಆ ಕ್ಷಣಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ನೀವೇ ಕೆಳಗಿನ ಚಿತ್ರಗಳನ್ನು ನೋಡಿ.....





























"ದೊಡ್ಡ ಬೆಟ್ಟ"ದಿಂದ ನಾವು ವಾಪಾಸ್ ಊಟಿಗೆ ಹೋಗಿ ಬೆಳಗಿನ ತಿಂಡಿ ತಿಂದು "ಕೊನ್ನೊರಿನತ್ತ" ಹರಟೆವು. ಕೊನ್ನೂರು ತಲುಪಿದ ಕೂಡಲೇ "ಟೂರಿಸ್ಟ್ ಗೈಡ್"ಗಳು ನಮ್ಮನ್ನು ಸುತ್ತುವರೆದರು. ಅವರಲ್ಲಿ ಒಬ್ಬರನ್ನು ಕರೆದುಕೊಂಡು ಕೊನ್ನೂರಿನ ಸುತ್ತಮುತ್ತಲ ಪ್ರವಾಸಿ ತಾಣಗಳ ವೀಕ್ಷಣೆಗೆ ಹೊರಟ ನಾವು ಮೊದಲು ಒಂದು ಟೀ ಎಸ್ಟೇಟ್ ತಲುಪಿ ಅಲ್ಲಿ ಕೆಲವೊಂದು ಫೋಟೋಗಳನ್ನು ಕ್ಲಿಕ್ಕಿಸಿದೆವು ಹಾಗೂ ಆ ಎಸ್ಟೇಟ್ನಲ್ಲಿ ಒಂದು ಕಾರ್ಖಾನೆ ಕೂಡ ಇದೆ ಮತ್ತು ಅವರೇ ಒಂದು ಅಂಗಡಿಯನ್ನೂ ಕೂಡ ಮಾಡಿ ಕೆಲವೊಂದು ಆಯುರ್ವೇದ ತೈಲ ಮತ್ತು ಟೀ ಪ್ಯಾಕೆಟ್ಗಳನ್ನು ಮಾರುತ್ತಾರೆ. ನಾವು ಆ ಅಂಗಡಿಗೆ ಹೋದೆವು. ಹೋದ ತಕ್ಷಣ ಅಂಗಡಿಯವ ನಮ್ಮೆಲ್ಲರಿಗೂ ಕುಡಿಯಲು ಟೀ ಕೊಟ್ಟು "ಟೀ ಕುಡಿರಿ, ಇಷ್ಟವಾದರೆ ಟೀ ಪ್ಯಾಕೆಟ್ ತೆಗೆದುಕೊಳ್ಳಿ" ಎಂದು ತಮಿಳಿನಲ್ಲಿ ಹೇಳಿದ.







ನಂತರ ನಾವು ಟೀ ಪ್ಯಾಕೆಟ್ ಹಾಗೂ ಕೆಲವೊಂದು ಆಯುರ್ವೇದ ತೈಲ ತೆಗೆದುಕೊಂಡೆವು. ಅಲ್ಲೇ ಆ ಟೀ ಎಸ್ಟೇಟ್ನಲ್ಲಿ ಸ್ವಲ್ಪ ಹೊತ್ತು ಸಮಯ ಕಳೆದು ಅಲ್ಲಿಂದ "Lamb's Rock" ಕಡೆಗೆ ಹೊರಟೆವು.

"Lamb's Rock" ಒಂದು "ವ್ಯೂ ಪಾಯಿಂಟ್". ಇದೊಂದು ಬೆಟ್ಟ ಪ್ರದೇಶ, ನೋಡಲು ಸುಂದರವಾಗಿದ್ದರೂ ಭಯ ಹುಟ್ಟಿಸುವಂತಿದೆ... ನೀವೇ ಕೆಳಗಿನ ಚಿತ್ರ ನೋಡಿ...









ನಂತರ ನಾವು ಅಲ್ಲಿಂದ "Sleeping Lady" "ವ್ಯೂ ಪಾಯಿಂಟ್" ತಲುಪಿದೆವು. ಇದಕ್ಕೆ ಹೆಸರು "Sleeping Lady" ಏಕೆಂದರೆ, ಆ ವ್ಯೂ ಪಾಯಿಂಟ್ನಲ್ಲಿ ನಿಂತು ನೋಡಿದರೆ ಬೆಟ್ಟಗಳ ಆಕೃತಿ "ಮಲಗಿರುವ ಹೆಂಗಸಿನಂತಿದೆ". ಕೆಳಗಿನ ಚಿತ್ರ ನೋಡಿ ....



ಅಲ್ಲಿಂದ ನಾವು "Dolphin Nose" ವ್ಯೂ ಪಾಯಿಂಟ್ಗೆ ಹೊರಟೆವು. ನಿಜವಾಗಿಯೂ ಇದೊಂದು ಅದ್ಭುತ ತಾಣ. ಇಲ್ಲಿ ನಾವು "ಬೈನಾಕುಲಾರ್" ಉಪಯೋಗಿಸಿ, ಜಲಪಾತವೊಂದನ್ನೂ, ಕಾಡು ಜನರ ವಾಸಸ್ಥಳವನ್ನು ನೋಡಬಹುದು ಹಾಗೂ ಸುತ್ತಲೂ ಟೀ ಎಸ್ಟೇಟ್ ನೋಡುಗರನ್ನು ಮೈಸೂರೆಗೊಳ್ಳುವಂತೆ ಮಾಡುತ್ತವೆ.









ನಾವು ಅಲ್ಲೇ ಸ್ನಾಕ್ಸ್, ಕಾಫಿ-ಟೀ ಕುಡಿದು ಸ್ವಲ್ಪ ಹೊತ್ತು ಕಾಲ ಕಳೆದು ವಾಪಾಸ್ ಕೊನ್ನೂರಿಗೆ ಹೊರಟೆವು. ಕೊನ್ನೂರು ತಲುಪಿದಾಗ ಮಧ್ಯಾನವಾಗಿತ್ತು....ಗೈಡ್ಗೆ ದುಡ್ಡು ಕೊಟ್ಟೆವು ಆಮೇಲೆ ಅವನೇ ಒಂದು ಒಳ್ಳೆಯ ಹೋಟೆಲ್ ತೋರಿಸಿ ಅಲ್ಲಿಂದ ಹೊರಟ. ನಾವು ಊಟಕ್ಕೆಂದು ಆ ಹೋಟೆಲ್ಗೆ ಹೋದೆವು....ಅಲ್ಲಿ "ಅನ್-ಲಿಮಿಟೆಡ್ ಊಟ" (mostly 65/- ಪರ್ meals) ಹಾಗೂ ಆವತ್ತು ಮಹೇಶನ ಟ್ರೀಟ್.....ಮತ್ತು ಅವತ್ತು ಬೆಳಿಗ್ಗೆ ಊಟಿಯಲ್ಲಿ ಯಾರೂ ಸರಿಯಾಗಿ ತಿಂಡಿ ತಿಂದಿರಲಿಲ್ಲ....ಇದೆ ಚಾನ್ಸು ಎಂದು ಎಲ್ಲರೂ ಯಾರಿಗೂ ಕಮ್ಮಿ ಇಲ್ಲದವರಂತೆ ಊಟ ಮಾಡಲು ಸುರು ಮಾಡಿದರು. ಮಧುಸೂದನ್ನ ಸಾಧನೆ ಮೆಚ್ಚಲೇ ಬೇಕು ಏಕೆಂದರೆ ಏಳು ಬಾರಿ ಅನ್ನ-ಸಾಂಬಾರ್ ಊಟ ಮಾಡಿದ (mostly 65/- per meals) ಅವನ ನಂತರದ ಸ್ಥಾನ ಮಹೇಶ್ನದು ಏಕೆಂದರೆ ಐದು ಬಾರಿ. ಮತ್ಯಾರೂ ಇವರನ್ನು ಊಟದಲ್ಲಿ ಸೋಲಿಸಲಾಗಲಿಲ್ಲ. ಅವತ್ತೆನಾದರೂ "ಅನ್-ಲಿಮಿಟೆಡ್ ಊಟ"ದ ಆ ಹೋಟೆಲ್ ಸಿಗದಿದ್ದರೆ ಮಹೇಶನ ಗತಿ ಅದೋ-ಗತಿಯಾಗುತಿತ್ತು (ಹೋಟೆಲ್ ಬಿಲ್). ನಂತರ ನಾವು ಅಲ್ಲಿಂದ "ಸೈಲೆಂಟ್ ವ್ಯಾಲಿ"ಯತ್ತ ಹೊರಟೆವು.

"ಸೈಲೆಂಟ್ ವ್ಯಾಲಿ" ತಲುಪುವ ಮುನ್ನವೇ ಸಂಜೆಯಾದ್ದರಿಂದ "ಅಗಲಿ" ಎಂಬ ಊರಿನಲ್ಲಿ ತಂಗಿದ್ದು ನಾಳೆ ಬೆಳಿಗ್ಗೆ "ಸೈಲೆಂಟ್ ವ್ಯಾಲಿ"ಗೆ ಹೋಗುವ ಯೋಚನೆ ಮಾಡಿ...



ಅಗಲಿಯಲ್ಲಿ ಲಾಡ್ಜ್ವೊಂದನ್ನು ಬುಕ್ ಮಾಡಿ ಅಲ್ಲೇ ಉಳಿದುಕೊಂದೆವು. ನಂತರ ರಾತ್ರಿಯೂಟಕ್ಕೆ ಅದೇ ಲಾಡ್ಜಿನ ಹೋಟೆಲ್ನಲ್ಲಿ ಕೆಲವೊಂದು ಮಂದಿ ಊಟ ಮಾಡಿದರು...ನಾವೊಂದಷ್ಟು ಜನ ಆ ಊಟ ಸೆಟ್ ಆಗದೆ ಬೇಕರಿಯಿಂದ ಬ್ರೆಡ್-ಜಾಮ್, ಹಣ್ಣುಗಳು ಹಾಗೂ ಕೂಲ್-ಡ್ರಿಂಕ್ಸ್ ತಂದು ತಿಂದು-ಕುಡಿದು ಆ ರಾತ್ರಿ ಕಾಲ ಕಳೆದೆವು. ಮಾರನೆಯ ದಿನ ಬೆಳಿಗ್ಗೆ ಎದ್ದು ಅಲ್ಲೇ ಇದ್ದ ಸಣ್ಣ ಹೋಟೆಲ್ನತ್ತ ಹೋಗಿ ಟೀ ಕುಡಿದು (ಸಣ್ಣದಾಗಿ ಮಳೆ, ತುಂಬಾ ಚಳಿ) ಸ್ವಲ್ಪ ಹೊತ್ತು ಹರಟಿ ಅಂದಿನ ಬೆಳಗಿನ ತಿಂಡಿಯನ್ನು "ಸೈಲೆಂಟ್ ವ್ಯಾಲಿ"ಯಲ್ಲೇ ತಿನ್ನೋಣವೆಂದು ನಿರ್ಧರಿಸಿ ಅಲ್ಲಿಂದ "ಸೈಲೆಂಟ್ ವ್ಯಾಲಿ"ಯತ್ತ ಹೊರಟೆವು. ಆ ಸ್ಥಳ ತಲುಪಿದಾಗ ಜೋರು ಮಳೆ. "ಸೈಲೆಂಟ್ ವ್ಯಾಲಿ" ಕಾಡನ್ನು ಪ್ರವೇಶಿಸಲು ಅಲ್ಲೇ ಇರುವ ಫಾರೆಸ್ಟ್ ಆಫೀಸ್ನಲ್ಲಿ ಟಿಕೆಟ್ ಪಡೆದುಕೊಳ್ಳಬೇಕು ಹಾಗೂ ಆ ಪ್ರದೇಶಕ್ಕೆ ಖಾಸಗಿ ವಾಹನಗಳ ಪ್ರವೇಶವಿಲ್ಲ. ಅವರೇ ಒಬ್ಬ ಗೈಡ್ ಹಾಗೂ ಫಾರೆಸ್ಟ್ ಜೀಪ್ ಒದಗಿಸುತ್ತಾರೆ ಎಂಬ ವಿಷಯ ತಿಳಿದು, ಮಳೆ ನಿಲ್ಲುವಷ್ಟರಲ್ಲಿ ತಿಂಡಿ ತಿನ್ನೋಣವೆಂದು ಅಲ್ಲೇ ಇದ್ದ ಸಣ್ಣ ಹೋಟೆಲ್ ಒಂದರಲ್ಲಿ ತಿಂಡಿ (ಅಪ್ಪು, ಬಾತುಕೋಳಿ ಮೊಟ್ಟೆ) ತಿಂದೆವು. ಆ ಹೋಟೆಲ್ನಲ್ಲಿ ನಮೆಗೆ ತಿಂಡಿ ತಿಂದ ಹಾಗೆ ಅನ್ನಿಸಲಿಲ್ಲ. ನಂತರ ನಾವು ಟಿಕೆಟ್ ಪಡೆದು "ಸೈಲೆಂಟ್ ವ್ಯಾಲಿ" ಪ್ರವೇಸಿಸಿದೆವು. ಇದೊಂದು ಅತ್ಯದ್ಭುತ-ರೋಮಾಂಚನಕಾರಿ ಸ್ಥಳ. ಎತ್ತನೋಡಿದರೂ ಹಸಿರು, ಆಗಾಗ ತುಂತುರು ಮಳೆ....ನಿಜವಾಗಿಯೂ ಇದೊಂದು ವಿಶ್ಮಯ ಲೋಕವೇ ಸರಿ... ಈ ಕಾಡಿನ ತುತ್ತ-ತುದಿಯನ್ನು (ಐದುವರೆ ಸಾವಿರ ಅಡಿ ಎತ್ತರ) ತಲುಪಿ ಸ್ವಲ್ಪ ಹೊತ್ತು ಸಮಯ ಕಳೆದು ವಾಪಾಸ್ ಆ ಫಾರೆಸ್ಟ್ ಚೆಕ್ ಪೋಸ್ಟ್ಗೆ ಬರಲು ನಾಲ್ಕು ಘಂಟೆಗಳು ಬೇಕು. ಆ ಕಾಡಿನಲ್ಲಿ ತೆರಳುವಾಗ ನಮಗೆ ಅರಿವಾಯಿತು "ಏಕೆ ಇಲ್ಲಿ ಖಾಸಗಿ ವಾಹನಗಳನ್ನು" ಬಿಡುವುದಿಲ್ಲವೆಂದು...ಏಕೆಂದೆರೆ ದಾರಿ ಅಷ್ಟೊಂದು ಚಿಕ್ಕದು ಹಾಗೂ ತಿರುವುಗಳು. ರಸ್ತೆಯೇ ಕಾಣದಷ್ಟು ಮಂಜು ಪಕ್ಕದಲ್ಲೇ ಭೀಕರ ಪ್ರಪಾತಗಳು, ದಾರಿಯುದ್ದಕ್ಕೂ ಜಲಪಾತಗಳು ನಮ್ಮನ್ನು ಮೈಮರೆಸಿದ್ದವು. ನಾವು ಆಗಾಗ ಮಾರ್ಗ ಮಧ್ಯದಲ್ಲಿ ಜೀಪು ನಿಲ್ಲಿಸಿ ಫೋಟೋಗಳನ್ನು ಕ್ಲಿಕ್ಕಿಸಿದೆವು. ಆಮೇಲೆ ನಾವು "ಸೈಲೆಂಟ್ ವ್ಯಾಲಿ"ಯ ತುತ್ತ-ತುದಿಯನ್ನು ತಲುಪಿದೆವು. ಅಲ್ಲಂತೂ ಕೊರೆಯುವ ಚಳಿ, ಜೋರು ಗಾಳಿ ನಾವಂತೂ ಸಕತ್ ಎಂಜಾಯ್ ಮಾಡಿದೆವು. ಅಲ್ಲಿ ಒಂದು "ಮೂರು ಅಂತಸ್ತಿನ ಟವರ್" ಇದೆ. ಆ ಟವರಿನ ತುದಿಯನ್ನು ತಲುಪಿ ಅಲ್ಲಿಂದ ನೋಡಿದರೆ ಒಂದು ನದಿ ಕಾಣಿಸುತ್ತದೆ. ನಾವು ಅಂತೆಯೇ ಟವರ್ ಹತ್ತಲು ಸುರು ಮಾಡಿದೆವು......ಹತ್ತಬೇಕಾದರೆ ಕೆಳಗೆ ತಿರುಗಿ ನೋಡಿದರೆ ಎಲ್ಲರಿಗೂ ಭಯ....ಏಕೆಂದರೆ ಜೋರು ಗಾಳಿ, ಚಳಿ.... ಆಗಲೇ ನಾವು ಐದುವರೆ ಸಾವಿರ ಅಡಿ ಎತ್ತರದಲ್ಲಿದ್ದು ಆಲ್ಲಿರುವ ಮೂರು ಅಂತಸ್ತಿನ ಟವರ್ ಹತ್ತಬೇಕು. ಅಂತೂ ನಾವು ಬಿಡದೆ ಆ ಟವರಿನ ತುದಿಯನ್ನು ತಲುಪಿದೆವು.... ಅಲ್ಲಂತೂ ಅಲ್ಲರೂ ಆ ಟವರಿನ ಕಂಬಿಗಳನ್ನು ಹಿಡಿದು ನಿಂತಿದ್ದೆವು..... ಎಲ್ಲರಿಗೂ ಕೈ ಬಿಟ್ಟರೆ ಎಲ್ಲಿ ಆ ಬಿರುಗಾಳಿಗೆ ತೂರಿ ಕೆಳಗಿನ ಪ್ರಪಾತಕ್ಕೆ ಬೀಳುತ್ತೆವೋ ಎಂಬ ಭಯ. ಅಲ್ಲಿ ನಾವೆಲ್ಲಾ ಸ್ನಾನ ಮಾಡಿದ ಹಾಗೆಯೇ ಆಗಿಹೋಗಿತ್ತು. ಹೇಗೋ ಅಲ್ಲೂ ಕೆಲವೊಂದು ಫೋಟೋಗಳನ್ನು ಕ್ಲಿಕ್ಕಿಸಿದೆವು....ಹಾಗೂ ಅಲ್ಲಿಂದ ಅ ನದಿಯನ್ನೂ ನೋಡಿದೆವು.....ಆ ನದಿ ಒಂದು ನಿಮಿಷ ಕಾಣಿಸಿದರೆ ಇನ್ನೊಂದು ನಿಮಿಷ ಕಾಣುತ್ತಿರಲಿಲ್ಲ ಅಷ್ಟೊಂದು ಮಂಜು.... ಇದಂತೂ ನಾವೆಲ್ಲರೂ ನಮ್ಮ ಜೀವನದಲ್ಲಿ ಮರೆಯಲಾಗದ ಅನುಭವ. ನಂತರ ನಾವು ಟವರಿನಿಂದ ಕೆಳಗಿಳಿದು ಕೆಲ ಕಾಲ ಹರಟಿ ಅಲ್ಲೇ ಇರುವ "ಮ್ಯೂಸಿಯಂ"ನತ್ತ ಹೊರಟು ಅಲ್ಲಿ ಸಂಗ್ರಹಿಸಿಡಲಾಗಿದ್ದ ಎಲ್ಲಾ ವಸ್ತುಗಳನ್ನು ನೋಡಿ ಅಲ್ಲಿಂದ ಹೊರಟೆವು. ಮತ್ತೊಂದು ವಿಷಯ ಇಲ್ಲಿ ತುಂಬಾ ಜಿಗಣೆಗಳ ಕಾಟ.

















































































ಅನಂತರ ನಾವು "ಸೈಲೆಂಟ್ ವ್ಯಾಲಿ"ಯಿಂದ "ಪೆರಂಬಿಕುಲಂ ವೈಲ್ಡ್ ಲೈಫ್ ಸ್ಯಾನ್ಚುರಿ"ಯತ್ತ ಹೊರಟೆವು. "ಪೆರಂಬಿಕುಲಂ ವೈಲ್ಡ್ ಲೈಫ್ ಸ್ಯಾನ್ಚುರಿ" ಫಾರೆಸ್ಟ್ ಚೆಕ್ ಪೋಸ್ಟ್ ತಲುಪಿದಾಗ ಸಂಜೆಯಾಗಿತ್ತು. ನಾವು ಆ ಫಾರೆಸ್ಟ್ ಪಕ್ಕದಲ್ಲೇ ಇದ್ದ ಊರೊಂದರಲ್ಲಿ ತಂಗಿದ್ದೆವು. ಅಂದಿನ ರಾತ್ರಿ ಭೋಜನವನ್ನು ಅದೇ ಊರಿನಲ್ಲಿದ್ದ ಸಣ್ಣ ಹೋಟೆಲ್ ಒಂದರಲ್ಲಿ ಇಡ್ಲಿ, ದೋಸೆ ತಿನ್ನೋದರೊಂದಿಗೆ ಮುಗಿಸಿದೆವು. ಮಾರನೆಯ ದಿನ ಬೆಳಿಗ್ಗೆ ಬೇಗ ಎದ್ದು ಕಾಫಿ-ಟೀ ಕುಡಿದು ಆ ಊರಿನಿಂದ "ಪೆರಂಬಿಕುಲಂ ವೈಲ್ಡ್ ಲೈಫ್ ಸ್ಯಾನ್ಚುರಿ" ಚೆಕ್ ಪೋಸ್ಟ್ ಕಡೆ ಹೊರಟೆವು.....ಆಗ ತುಂತುರು ಮಳೆ ಹಾಗೂ ಚಳಿ....ದಾರಿಯುದ್ದಕ್ಕೂ ಇದ್ದ ದಟ್ಟ ಕಾಡು ನಮ್ಮಲ್ಲಿ ಹತ್ತಲವಾರು ಕುತೂಹಲಗಳನ್ನು ಸೃಷ್ಟಿಸಿತ್ತು. ಚೆಕ್ ಪೋಸ್ಟ್ ತಲುಪಿದ ನಂತರ ಎಲ್ಲರೂ ಪ್ರವೇಶ ಚೀಟಿಗಳನ್ನು ತೆಗೆದುಕೊಂಡು ಫಾರೆಸ್ಟ್ ಸಫಾರಿ ವ್ಯಾನ್ನಲ್ಲಿ ಕುಳಿತೆವು. ಸ್ವಲ್ಪ ಸಮಯದ ನಂತರ ವ್ಯಾನ್ ಆಲ್ಲಿಂದ ಕಾಡಿನೊಳಗೆ ಪ್ರವೇಶಿಸಲು ಸಿದ್ದವಾಗಿ ಮುನ್ನಡೆದ ಕೂಡಲೇ ..... ರಸ್ತೆಯ ಪಕ್ಕದಲ್ಲೇ ಕುಳಿತಿದ್ದ ನವಿಲುಗಳನ್ನು ಕಂಡೆವು. ಅನಂತರ ಕಾಡು ಹಂದಿ, ಸಾಂಬಾರ್ ಡೀರ್, ಜಿಂಕೆಗಳು, ಲಯನ್ ಟಯಲ್ದ್ ಕೋತಿಗಳನ್ನು ನೋಡಿದೆವು. ಅಲ್ಲಿಂದ ಮುಂದೆ ಕಾಡಿನ ಮಧ್ಯೆ ಇರುವ ಡ್ಯಾಮ್ ತಲುಪಿದೆವು. ಡ್ರೈವರ್ ಅಲ್ಲಿ ವ್ಯಾನ್ ನಿಲ್ಲಿಸಿದ. ನಾವೆಲ್ಲರೂ ಕೆಳಗಿಳಿದು ಅಲ್ಲೆಲ್ಲ ಸುತ್ತಾಡಿ ಕೆಲವೊಂದು ಫೋಟೋ ಕ್ಲಿಕ್ಕಿಸಿದೆವು. ಇದೊಂದು ದಟ್ಟ ಕಾಡಿನ ಮಧ್ಯೆ ಇರುವ ನದಿ....ಇಲ್ಲಿಗೆ ಪ್ರಾಣಿಗಳು ನೀರು ಕುಡಿಯಲು ಬರುತ್ತವೆ. ಅಲ್ಲಿಂದ ಮುಂದೆ ಒಂದು ವ್ಯೂ ಪಾಯಿಂಟ್ ಇದೆ, ಅಲ್ಲಿ ನಿಂತು ನೋಡಿದರೆ ಒಂದು ನದಿ ಕಾಣಿಸುತ್ತದೆ. ಆಮೇಲೆ ಮುಂದೆ ಚಲಿಸುತ್ತಿದ್ದಂತೆ ಇನ್ನೂ ದಟ್ಟ ಕಾಡು, ಅಲ್ಲಿ "ಸಾವಿರಾರು ವರ್ಷಗಳ ಹಳೆಯದಾದ ಟೀಕ್ ಮರವಿದೆ".... "ಈ ಮರವನ್ನು ಯಾರೂ ಕತ್ತರಿಸುವುದಿಲ್ಲವಂತೆ.... ಹಿಂದೊಮ್ಮೆ ಯಾರೋ ಒಬ್ಬ ಈ ಮರ ಕಡಿಯಲು ಪ್ರಯತ್ನಿಸಿದಾಗ ಮರದಿಂದ ರಕ್ತ ಬಂದಿತ್ತಂತೆ" ಎಂಬ ದನಿಗಳು ನಮಗೆ ಕೇಳಿಬರುತ್ತಿದ್ದವು. ಆವಾಗ ಸ್ವಲ್ಪ ಮಳೆ ಬರುತ್ತಿದ್ದರಿಂದ ಸ್ವಲ್ಪ ಜನ ವ್ಯಾನ್ನಿಂದ ಕೆಳಗಿಳಿಯದೆ ಅಲ್ಲೇ ಕುಳಿತಿದ್ದರು. ಅನಂತರ ಡ್ರೈವರ್ ಕಾಡಿನ ನಡುವೆಯೇ ಇರುವ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿ ಬೆಳಗಿನ ತಿಂಡಿ ತಿನ್ನಲು ತಿಳಿಸಿದ. ನಾವೆಲ್ಲರೂ ಅಲ್ಲೇ ತಿಂಡಿ ತಿಂದೆವು.....ನಂತರ ನಾವೆಲ್ಲಾ ಚೆಕ್ ಪೋಸ್ಟ್ಗೆ ವಾಪಾಸ್ ತಲುಪಿದೆವು..... ಮಹೇಶ ಹಾಗೂ ಡ್ರೈವರ್ ಸಫಾರಿಗೆ ಬರದೆ ಕಾರಿನಲ್ಲೇ ನಿದ್ದೆ ಮಾಡುತ್ತಾ ನಮಗಾಗಿ ಕಾಯುತ್ತಿದ್ದರು.



































































ನಂತರ ನಾವು ಅಲ್ಲಿಂದ "ಮುನ್ನಾರ್" ಕಡೆಗೆ ನಡೆದೆವು.

ಇಲ್ಲಿಂದ ಮುಂದಕ್ಕಂತ್ತೂ ಆ ಎಲ್ಲ ಪ್ರವಾಸಿ ತಾಣಗಳು ಒಂದಕ್ಕೊಂದು ಕಡಿಮೆಯಿಲ್ಲ ಎಂಬಂತಿದ್ದವು. ನಾವು "ಪೆರಂಬಿಕುಲಂ ವೈಲ್ಡ್ ಲೈಫ್ ಸ್ಯಾನ್ಚುರಿ"ಯಿಂದ ಮುನ್ನಾರಿಗೆಹೋಗುವಾಗ ದಾರಿಯುದ್ದಕ್ಕೂ ತುಂತುರು ಮಳೆ, ಜಲಪಾತಗಳು, ದಟ್ಟ ಕಾಡು, ಟೀ ಎಸ್ಟೇಟ್ ನಮ್ಮನ್ನು ಯಾವೊದೋ ಒಂದು ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು......ನಾವು "ಚಿಣ್ಣಾರ್ ವೈಲ್ಡ್ ಲೈಫ್ ಸ್ಯಾನ್ಚುರಿ" ಟೈಗರ್ ರಿಸರ್ವ್ ಮೂಲಕ ಮುನ್ನಾರ್ ಕಡೆ ಮುನ್ನಡೆದಾಗ ಅಲ್ಲೇ ಮಾರ್ಗ ಮಧ್ಯೆದಲ್ಲಿ ಕಾರು ನಿಲ್ಲಿಸಿ ಆ ತುಂತುರು ಮಳೆಯ ನಡುವೆ ಆ ಪಕ್ಕದಲ್ಲೇ ಇದ್ದ ಜಲಪಾತದ ಹತ್ತಿರ ಕಾಫಿ-ಟೀ ಕುಡಿದ ಅನುಭವ ಮರೆಯುವಂತಿಲ್ಲ ಹಾಗೂ ಅಂಗಡಿಯವ "ಯಾರೂ ಆ ಜಲಪಾತದ ಹತ್ತಿರ ಹೋಗಬೇಡಿ.... ತುಂಬಾ ಅಪಾಯಕಾರಿ" ಎಂದು ನಮ್ಮನ್ನು ಎಚ್ಚರಿಸಿದ... ಆದರೂ ನಾವು ಹತ್ತಿರ ಹೋಗಿ ಕೆಲವೊಂದು ಫೋಟೋಗಳನ್ನು ಕ್ಲಿಕ್ಕಿಸಿದೆವು. ನಾವು ಕಂಡ ಮುನ್ನಾರ್ ಅನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ..... ನೀವೇ ಕೆಳಗಿನ ಚಿತ್ರಗಳನ್ನು ನೋಡಿ.....ಅನಂತರ ನಾವು ಮುಂದೆ ಹೊರಟರೆ ದಾರಿಯುದ್ದಕ್ಕೂ ಜಲಪಾತಗಳು.....ಟಾಟ ಟೀ ಎಸ್ಟೇಟ್.... ಬೆಟ್ಟ ಪ್ರದೇಶ ನಮ್ಮನ್ನು ವಿಷ್ಮಯ ಲೋಕಕ್ಕೆ ಕರೆದುಕೊಂಡು ಹೋಗಿದ್ದವು.....ನಂತರ ನಾವು ಮುನ್ನಾರಿನಲ್ಲಿ ಮಧ್ಯಾನದ ಊಟ ಮುಗಿಸಿದೆವು. ಮುನ್ನಾರ್ ಅಂತೂ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಪ್ರವಾಸಿ ತಾಣ.













































ನಂತರ ನಾವು ಅಲ್ಲೆಲ್ಲಾ ಸುತ್ತಾಡಿ "ತೇಕಡಿ"ಗೆ ಹೊರಟೆವು.......ಮುನ್ನಾರಿನಿಂದ ತೇಕಡಿ ಕಡೆಗೆ ಮಾರ್ಗ ಮಧ್ಯದೆಲೆಲ್ಲಾ ಕಾರು ನಿಲ್ಲಿಸಿ ಫೋಟೋ ತೆಗೆದುಕೊಂಡೆವು....









ನಾವು ತೇಕಡಿ ತಲುಪುವ ಮಾರ್ಗ ಮಧ್ಯೆದಲ್ಲೇ ಸಂಜೆಯಾಗಿತ್ತು......ಕಾರಿನಲ್ಲಿ ನಮ್ಮ ಹರಟೆಗಳು ನಮ್ಮೆಲ್ಲರನ್ನೂ ರಂಜಿಸುತ್ತಿದ್ದವು......ನಾವೆಲ್ಲರೂ ಮಹೇಶನ ಜೋಕ್ಸುಗಳನ್ನು ಮರೆಯುವಂತಿಲ್ಲ....ನಾವು ನಮ್ಮದೇ ಫಿಲಂ ಡೈರೆಕ್ಟ್ ಮಾಡುತ್ತಾ ಎಂಜಾಯ್ ಮಾಡಿದೆವು.....ಅಂತೂ ಇಂತೂ ನಾವು "ತೇಕಡಿ" ಟೈಗರ್ ರಿಸರ್ವ್ ಚೆಕ್ ಪೋಸ್ಟ್ ತಲುಪಿದಾಗ ರಾತ್ರಿಯಾಗಿತ್ತು...... ನಾವು ಅಲ್ಲೇ ಒಂದು ಲಾಡ್ಜ್ ಬುಕ್ ಮಾಡಿ....ನಂತರ ಅಲ್ಲೇ ಇದ್ದ ಹೋಟೆಲ್ನಲ್ಲಿ ರಾತ್ರಿ ಊಟ ಮುಗಿಸಿದೆವು (ತೇಕಡಿಯ ಹೋಟೆಲ್ಗಳಲ್ಲಿ ಊಟ, ತಿಂಡಿ ಬೆಲೆ ಮಾತ್ರ ತುಂಬಾ ಜ್ಯಾಸ್ತಿ). ನಂತರ ನಾವೆಲ್ಲರೂ ಆ ರಾತ್ರಿ ಅಲ್ಲೇ ತಂಗಿದ್ದು.....ಬೆಳ್ಳಂಬೆಳಿಗ್ಗೆ ಎದ್ದು ಒಂದು ಆಟೋದಲ್ಲಿ ನಾವೆಲ್ಲಾ "ತೇಕಡಿ ಬೋಟಿಂಗ್" ತಲುಪಿದೆವು. ರಾಕೇಶ್ ಮಾತ್ರ ಬೋಟಿಂಗ್ಗೆ ಬರದೆ ಅಲ್ಲೇ ಮಲಗಿದ್ದ. ಆಮೇಲೆ ನಾವು ಅಲ್ಲಿ ಟಿಕೆಟ್ ತೆಗೆದುಕೊಂಡು (ಬೋಟ್ :- ಜಲಕನ್ನಿಕೆ [ಸರಿಯಾಗಿ ನೆನಪಿಲ್ಲ]) ಅಲ್ಲೇ ಸುತ್ತಾಡುತಿದ್ದೆವು....ಬೋಟ್ ಬಂದ ತಕ್ಷಣ ನಾವೆಲ್ಲಾ ಬೋಟ್ನಲ್ಲಿ ಕುಳಿತೆವು...ತುಂತುರು ಮಳೆ ಬರುತ್ತಲೇ ಇತ್ತು.... ಆ ಸಮಯದಲ್ಲಿ ತುಂಬಾ ನೀರಿತ್ತು..... (ನಾವು ಈ ಪ್ರವಾಸದಿಂದ ಹಿಂದಿರುಗಿದ ಒಂದೆರಡು ತಿಂಗಳೋಷ್ಟರಲ್ಲಿ "ತೇಕಡಿ ದೋಣಿ ದುರಂತ" ಕೂಡ ಸಂಭವಿಸಿತು. ಇದನ್ನು ನೋಡಿದ ನಮ್ಮ ಮಮ್ಮಿ, ಡ್ಯಾಡಿ ಕೈಯಲ್ಲಿ ನಾವು ಬೈಸಿಕೊಂಡೆವು - ಪ್ರೀತಿಯಿಂದ) .....ಆ ಬೋಟ್ ಸಫಾರಿಯಲ್ಲಿ ನಾವು ಆನೆ, ಕಾಡು ಹಂದಿಗಳ ಗುಂಪು ಕಂಡೆವು......ನಾವು ತುಂಬಾ ಎಂಜಾಯ್ ಮಾಡಿದೆವು.....ಎತ್ತ ನೋಡಿದರೂ ದಟ್ಟ ಕಾಡು, ಬೆಟ್ಟ ಬಲು ಮೋಹಕವಾಗಿತ್ತು.... ಬೋಟ್ನಲ್ಲಿ ಕ್ಯಾಮೆರಾ ತೆಗೆದುಕೊಂಡು ಹೋಗಬೇಕಾದರೆ ಅದಕ್ಕೂ ಟಿಕೆಟ್ ತೆಗೆದುಕೊಳ್ಳಬೇಕು..... ಆದರೆ ನಾವು ಟಿಕೆಟ್ಟೆ ತೆಗೆದುಕೊಳ್ಳದೆ ಕ್ಯಾಮೆರಾ ಬಳಸಿ ಫೋಟೋ ತೆಗೆದೆವು.









































ನಂತರ ನಾವು ಅಲ್ಲಿಂದ ಲಾಡ್ಜಿಗೆ ವಾಪಾಸ್ ಆಗಿ ಬೆಳಗಿನ ತಿಂಡಿ ತಿಂದು.... ಶಾಪಿಂಗ್ ಮಾಡಿ.....ಮುನ್ನಡೆಯಲು, ಸ್ಥಳಿಯನೊಬ್ಬ "ಮಸಾಜ್ ಮೊಡಿಸ್ಕೊಳ್ಳಿ......" ಎನ್ನಲು..... ಮಧುಸೂಧನ ಹಾಗೂ ರವಿಂದ್ರ ಮಸಾಜ್ ಮಾಡಿಸಿಕೊಂಡರು. ನಂತರ ನಾವು ಅಲ್ಲಿಂದ "ಮದುರೈ" ಕಡೆಗೆ ಹೊರಟೆವು.

ಮುಂದೆ ನಾವು "ಮದುರೈ" ತಲುಪಿದೆವು....ಅಂದು ನನ್ನ ಟ್ರೀಟ್ ಕೊಡಿಸುವ ಸರದಿ.... ಅಲ್ಲಿ ನಮ್ಮ ಕಾರಿನ "wheel alignment" ಮಾಡಿಸಿ, ಅಲ್ಲೇ ಹೋಟೆಲ್ ಒಂದರಲ್ಲಿ ಊಟ ಮುಗಿಸಿ.....ದೇವಸ್ಥಾನದತ್ತ ಹೊರಟು ಅಲ್ಲೇ ಸ್ವಲ್ಪ ದೂರದಲ್ಲಿ ಕಾರ್ ನಿಲ್ಲಿಸಿ ಎಲ್ಲರೂ ದೇವಸ್ಥಾನದ ಒಳ ಪ್ರವೇಶಿಸಲು.....ಕಾವಲಿನವನು ನನ್ನನ್ನು ಮತ್ತು ಮಹೇಶನನ್ನು ಒಳಗಡೆ ಬಿಡಲಿಲ್ಲ....ಕಾರಣ ನಾವಿಬ್ಬರು 3/4 ಪ್ಯಾಂಟ್ ಹಾಕಿದ್ದೆವು.... ಮಿಕ್ಕಿದವರೆಲ್ಲರೂ ಒಳ ಪ್ರವೇಶಿಸಿದರು. ನಾವು ಮಾತ್ರ ವಾಪಾಸ್ ಕಾರಿನತ್ತಿರ ಹೋಗಿ ಫುಲ್ ಪ್ಯಾಂಟ್ ಹಾಕಿಕೊಂಡು ಬಂದ ಮೇಲೆ ನಮ್ಮನ್ನು ಒಳ ಹೋಗಲು ಬಿಟ್ಟರು.

















ಆಮೇಲೆ ನಾವು ಅಲ್ಲಿ ಪೂಜೆ ಮಾಡಿಸಿ....ಸ್ವಲ್ಪ ಹೊತ್ತು ಕಾಲ ಕಳೆದು ಅನಂತರ ಅಲ್ಲಿಂದ ಹೊರ ಬಂದು.....ಸ್ವಲ್ಪ ಶಾಪಿಂಗ್ ಮಾಡಿ, ತಿಂಡಿ ತಿಂದು ಕಾರನ್ನೇರಿ "ಕನ್ಯಾಕುಮಾರಿ"ಯತ್ತ ಹೊರಟೆವು. ಆಗ ರಾತ್ರಿಯಾಗಿತ್ತು.

ನಾವು ಕನ್ಯಾಕುಮಾರಿ ತಲುಪುವ ಮಾರ್ಗ ಮಧ್ಯದಲ್ಲೆಲ್ಲಾ ಕಾರು ನಿಲ್ಲಿಸಿ ಸ್ನಾಕ್ಸ್, ಕಾಫಿ-ಟೀ ಕುಡಿಯುತ್ತಾ ಮುಂದೆ ಸಾಗುತಿದ್ದೆವು.......ನಾವು ಕನ್ಯಾಕುಮಾರಿ ತಲುಪಿದಾಗ ಸಮಯ ಬೆಳಗಿನ ಜಾವ 4:00am ಘಂಟೆ. ಅಲ್ಲಿ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ.....ಬೆಳಗಾಗುವವರೆಗೂ ಆಗೇ ಕಾರಿನಲ್ಲಿ ಟೈಮ್ ಪಾಸ್ ಮಾಡಿ.....ನಂತರ ಸೂರ್ಯೋದಯ ನೋಡಲು ಬೆಳಿಗ್ಗೆ 5:00am - 5:30am ಗೆ ಸಮುದ್ರದ ಹತ್ತಿರ ಹೋದೆವು....ಅಲ್ಲಂತೂ ತುಂಬಾ ಜನ....ಕೆಲವೊಂದು ಫೋಟೋಗಳನ್ನು ಕ್ಲಿಕ್ಕಿಸಿದೆವು.



ಅನಂತರ ಅಲ್ಲೇ ಹೋಟೆಲ್ ಒಂದರಲ್ಲಿ ತಿಂಡಿ ತಿಂದೆವು. ಆಮೇಲೆ "ವಿವೇಕಾನಂದ ಬಂಡೆ"ಗೆ ಹೋಗಲು ಟಿಕೆಟ್ ತೆಗೆದುಕೊಂಡು "container"ನ ಒಳ ಹೊಕ್ಕೆವು. ಅನಂತರ ನಮ್ಮನ್ನೆಲ್ಲಾ ಹೊತ್ತ ಆ "container" ವಿವೇಕಾನಂದ ಬಂಡೆಯತ್ತ ಸಾಗಿತು. ಅದಂತು ಭಯ ಹುಟ್ಟಿಸುವಂತಹ ಹಾಗೂ ರೋಮಾಂಚನಕಾರಿ ಅನುಭವ.....ಅಲೆಗಳು "container"ನನ್ನು ಅಪ್ಪಳಿಸಿದಾಗ "container" ಆಲುಗಾಟವನ್ನು ಕಂಡು ಎಲ್ಲರೂ ಗಾಬರಿಗೊಳ್ಳುತಿದ್ದೆವು. ಅನಂತರ ವಿವೇಕಾನಂದ ಬಂಡೆಯಲ್ಲಿ ಸುತ್ತಾಡಿ....ಶಾಪಿಂಗ್ ಮಾಡಿ...ಫೋಟೋ ತೆಗೆದುಕೊಂಡು....."container"ಗಾಗಿ ಪಕ್ಕದ "ತಿರುವಳ್ಳುವರ್ ಪ್ರತಿಮೆಯ" ಬಳಿ ಹೋಗಲು ಕಾಯುತ್ತಾ ಅನಂತರ "ತಿರುವಳ್ಳುವರ್ ಪ್ರತಿಮೆ" ತಲುಪಿ ಕೆಲ ಕಾಲ ಕಳೆದು ಅಲ್ಲಿಂದ ವಾಪಸ್ ಕನ್ಯಾಕುಮಾರಿಗೆ "container"ನಲ್ಲಿ ಹಿಂದಿರುಗಿದೆವು.













































ಆಮೇಲೆ ಕನ್ಯಾಕುಮಾರಿಯಲ್ಲಿ ಶಾಪಿಂಗ್ ಮಾಡಿ "ಕೋವಲಂ ಬೀಚ್" ಕಡೆ ಹೊರಟೆವು.

ಕೋವಲಂ ಬೀಚ್ ತಲುಪುವ ಮುನ್ನ ನಾವೊಂದು ಬೀಚ್ಗೆ ಹೋದೆವು. ಅಲ್ಲೇ ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ ಡಾಬವೊಂದರಲ್ಲಿ ಮಧ್ಯಾನದ ಊಟ (ಪರೋಟ, ಕೂಲ್-ಡ್ರಿಂಕ್ಸ್, ಐಸ್-ಕ್ರೀಂ) ಮುಗಿಸಿದೆವು. ಆ ಬೀಚ್ ಹೆಸರು ನೆನಪಿಲ್ಲ ಆದರೆ ನಾವಂತೂ ತುಂಬಾ ಎಂಜಾಯ್ ಮಾಡಿದೆವು. ಕೆಳಗಿನ ಚಿತ್ರಗಳನ್ನು ನೋಡಿ...ನಿಮಗೇ ತಿಳಿಯುತ್ತದೆ.























ನಾವು ಸಂಜೆಯವರೆವಿಗೂ ಅಲ್ಲೇ ಕಾಲ ಕಳೆದೆವು. ನಂತರ ನಾವು ಅಲ್ಲಿಂದ ರಾತ್ರಿಯಲ್ಲೇ ಕೋವಲಂ ಬೀಚ್ಗೆ ಹೊರಟೆವು.

ನಾವು ಕೋವಲಂ ಬೀಚ್ ತಲುಪಿದಾಗ ರಾತ್ರಿಯಾಗಿದುದ್ದರಿಂದ ಆ ಬೀಚ್ ಸಮೀಪವೇ ಇರುವ ಹೋಟೆಲ್ ಒಂದರಲ್ಲಿ ರೂಂ (3rd Floor) ಬುಕ್ ಮಾಡಿ....ಅಲ್ಲೇ "Candle Light Dinner" (ವೆಜ್ ಫ್ರೈಡ್ ರೈಸ್) ಮುಗಿಸಿದೆವು. ಅನಂತರ ನಾವೆಲ್ಲಾ ಮಾರನೆಯ ದಿನ ಬೆಳಿಗ್ಗೆ ಕೋವಲಂ ಬೀಚ್ನಲ್ಲಿ ಆಟ ಆಡಿ (ಫೂಟ್-ಬಾಲ್) ಅಲ್ಲೇ ಕೆಲ ಕಾಲ ಸಮಯ ಕಳೆದು













ಮುಂದೆ "ಕೊಲ್ಲಂ ಬೀಚ್"ನತ್ತ ಹೊರಟೆವು.

ನಾವು ಕೊಲ್ಲಂ ಬೀಚ್ ತಲುಪಿದಾಗ ಮಧ್ಯಾನದ ಸಮಯ. ಅಲ್ಲಿ ಯಾರನ್ನೂ ನೀರಿಗೆ ಇಳಿಯಲು ಬಿಡಲಿಲ್ಲ ಕಾರಣ... ಬಾರಿ ಅಲೆಗಳು....ನೋಡಿದರೆ ಭಯ ಹುಟ್ಟಿಸುವಂತಿದ್ದವು.....ಮತ್ತೇನು ಮಾಡೋದು..? ಅಲ್ಲೇ ಸ್ವಲ್ಪ ಹೊತ್ತು ಅಲ್ಲೇ ಇದ್ದು ಅಲ್ಲಿಂದ















ಮುಂದೆ "ಅಲಿಪ್ಪೆ"ಗೆ ಹೊರಟೆವು.

ಅಲಿಪ್ಪೆ ತಲುಪುವ ಮುನ್ನ ನಾವು "ತ್ರಿವೆಂಡ್ರಂ" ತಲುಪಿದೆವು. ಅಲ್ಲಿ "GATE" ಪರೀಕ್ಷೆಯ ಸಲುವಾಗಿ ರವಿಂದ್ರ ಬೆಂಗಳೂರಿಗೆ ವಾಪಾಸ್ ಹೋಗುವುದಾಗಿ ತಿಳಿಸಿದ. ರಾಕೇಶ ಅದಕ್ಕೆ ಬಸ್ ಟಿಕೆಟ್ ವ್ಯವಸ್ಥೆ ಮಾಡಿ ಅವನನ್ನು ಅಲ್ಲಿಂದ ವಾಪಾಸ್ ಬೆಂಗಳೂರಿಗೆ ಕಳುಹಿಸಿದೆವು. ನಂತರ ನಾವು ಅಲಿಪ್ಪೆ ತಲುಪಿದಾಗ ಸಮಯ ಸುಮಾರು 10pm - 11pm. ಅಲ್ಲಿ ಕಾರು ನಿಲ್ಲಿಸಿದ್ದೆ ತಡ ಒಂದಷ್ಟು ಏಜೆಂಟರುಗಳು ನಮ್ಮನ್ನು ಸುತ್ತುವರೆದು ಮಲಯಾಳಂ/ತಮಿಳಿನಲ್ಲಿ "ಸರ್ ಇಷ್ಟು _____ ದುಡ್ಡು ಕೊಡಿ ಉಳಿದುಕೊಳ್ಳೋಕೆ 'ಹೋಟೆಲ್' , 'ಹೌಸ್ ಬೋಟ್' ವ್ಯವಸ್ಥೆ ಮಾಡ್ತೇವೆ." ಎಂದು ಹೇಳಿದರು ನಾವು ಮತ್ತೆ ಬರುತ್ತೆವೆಯೆಂದು ಮುಂದೆ ಹೊರಟೆವು.....ಒಬ್ಬ ಏಜೆಂಟರ್ ಮಾತ್ರ ನಮ್ಮನ್ನೇ ಅವನ ಬೈಕ್ನಲ್ಲಿ ಹಿಂಬಾಲಿಸಿ ಬರುತ್ತಿದ್ದ.....ಮುಂದೆ ನಾವೊಂದು ಟ್ರಾವೆಲ್ಸ್/ಹೋಟೆಲ್ ಮುಂದೆ ಕಾರು ನಿಲ್ಲಿಸಿ ಟೀ ಕುಡಿಯುತ್ತಿರಲು ನಮ್ಮನ್ನು ಹಿಂಬಾಲಿಸಿ ಬಂದ ಆ ಏಜೆಂಟ್ (ಮದ್ಯಪಾನ ಮಾಡಿ ತೂರಡುತಿದ್ದ) ಮತ್ತೆ ಅದೇ ರಾಗ ತೆಗೆದ. ಆ ಅಂಗಡಿಯವ ಮಲಯಾಳಂನಲ್ಲಿ ಆತನಿಗೆ "ಇವರು ಆಗಲೇ ಬೇರೆ ಬೋಟ್ ಬುಕ್ ಮಾಡಿದ್ದಾರೆ...." ಎಂದು ಹೇಳಲು ಆ ಏಜೆಂಟ್ ಅಲ್ಲಿಂದ ಹೊರತು ಹೋದ. ನಂತರ ಆ ಟೀ ಅಂಗಡಿಯವನೇ ಒಬ್ಬ ಏಜೆಂಟರಿಗೆ ಫೋನ್ ಮಾಡಿ ಬರಲು ಹೇಳಿ ನಂತರ ನಾವು ಆ ಏಜೆಂಟರ ಆಫೀಸಿಗೆ ಹೋಗಿ ಒಂದು "ಶಿಕಾರಿ" ಬುಕ್ ಮಾಡಿದೆವು.....ನಂತರ ಆ ಏಜೆಂಟ್ ಆತನ ಆಫೀಸ್ ಬಳಿಯೇ ಕಾರ್ ನಿಲ್ಲಿಸಲು ಅನುಮತಿ ನೀಡಿದ. ಅಷ್ಟೊತ್ತಿಗಾಗಲೇ ಮಧ್ಯ ರಾತ್ರಿಯಾಗಿತ್ತು ನಾವು ಕಾರಿನಲ್ಲೇ ಬೆಳಗಾಗುವವರೆಗೂ ಮಲಗಿದ್ದೆವು. ಮಾರನೆಯ ದಿನ ಬೆಳಿಗ್ಗೆ 8:30am ಗೆ ಬೋಟ್(ಶಿಕಾರಿ)ನಲ್ಲಿ ಕುಳಿತು ವಿಹಾರ ಸುರು ಮಾಡಿದೆವು.........ಇದಂತೂ ರೋಮಾಂಚನಕಾರಿ ಅನುಭವ. ಆ ನದಿಗೆ ಅಂಟಿಕೊಂಡಂತೆ ಕಟ್ಟಿರುವ ಮನೆಗಳು, ಸಾಲು ತೆಂಗಿನ ಮರಗಳು, ಅಲ್ಲಿನ ಬೋಟ್ ಸ್ಟಾಪ್ಗಳು (ನಮ್ಮಲ್ಲಿನ ಬಸ್ ಸ್ಟಾಪ್ಗಳಂತೆ) ನಮ್ಮ ಮನಸೂರೆಗೊಲಿಸಿದವು........ಕೆಲವೊಂದು ಚಿತ್ರಗಳು :







































ಅಲಿಪ್ಪೆಯಿಂದ ನಾವು "ಗುರುವಾಯುರ್"ಗೆ ಹೊರಟೆವು. ಅಲ್ಲಿ ಕಲ್ಯಾಣಿಯಲ್ಲಿ ಸ್ನಾನ ಮಾಡಿ ಪಂಚೆಯುಟ್ಟು ದೇವರ ದರ್ಶನ ಮಾಡಿದೆವು. ಅಲ್ಲೇ ರಾಕೇಶನಿಗೆ ಅವರ ಮನೆಯಿಂದ ಫೋನ್ ಬಂತು.....ಆದ್ದರಿಂದ ಅವನು ಅಲ್ಲಿಂದ ಪ್ರವಾಸ ಅಂತ್ಯಗೊಳಿಸಿ ವಾಪಸ್ ಬೆಂಗಳೂರಿಗೆ ಹೊರಟ. ಆಗ ಸಮಯ 4:00pm - 5:00pm. ನಂತರ ನಾವು "ಗುರುವಾಯುರ್"ಯಿಂದ ಮಂಗಳೂರಿನ ಕಡೆ ಹೊರಟೆವು. ಎಲ್ಲರೂ ಸುಸ್ತಾಗಿ ಕಾರಿನಲ್ಲಿ ನಿದ್ದೆ ಮಾಡುತಿದ್ದರು ಆದರೆ ನಾನು ಹಾಗೂ ಮಹೇಶ ಮಾತ್ರ ನಿದ್ದೆ ಮಾಡದೆ ಡ್ರೈವರ್ಗೆ ರಾತ್ರಿ ಕಾರು ನಡೆಸಲು ಕಂಪನಿ ಕೊಟ್ಟೆವು. ನಾವು ಇನ್ನೂ ಮಂಗಳೂರು ತಲುಪಿರಲಿಲ್ಲ..... ಅಲ್ಲಿಂದ ಮಂಗಳೂರು ಸುಮಾರು ಹತ್ತದಿನೈದು ಕಿಲೋಮೀಟರ್ ಇತ್ತು ಹಾಗೂ ಸಮಯ ಕೂಡ ಎರಡು ಗಂಟೆ ಆಗಿತ್ತು ಅನ್ನಿಸುತ್ತೆ......ಆಗ ಡ್ರೈವರ್ ನನಗೆ ನಿದ್ದೆ ಬರ್ತಿದೆ ಇವತ್ತು ಇಲ್ಲೇ ಇದ್ದು ನಾಳೆ ಬೆಳಿಗ್ಗೆ ಹೊರಡೋಣ ಎಂದು ಅಲ್ಲೇ ಹೈವೇಯಲ್ಲಿ ಪಕ್ಕದಲ್ಲಿದ್ದ ಟೀ ಅಂಗಡಿಯೊಂದರ ಹತ್ತಿರ ಕಾರು ನಿಲ್ಲಿಸಿದ. ನಂತರ ನಾವು ಬೆಳಿಗ್ಗೆ ಮಂಗಳೂರಿನಲ್ಲಿ ತಿಂಡಿ ತಿಂದು "ಉಡುಪಿ"ಗೆ ತೆರಳಿದೆವು.

ನಂತರ ಉಡುಪಿಯಲ್ಲಿ ಸ್ನಾನ ಮಾಡಿ, ದೇವರ ದರ್ಶನ ಮಾಡಿ, ದೇವಸ್ಥಾನದಲ್ಲೇ ಮಧ್ಯಾನದ ಊಟ ಮುಗಿಸಿ ಅಲ್ಲಿಂದ "ಆಗುಂಬೆ"ಯತ್ತ ನಡೆದೆವು. ಉಡುಪಿಯಲ್ಲಿ ಫೋಟೋ ತೆಗೆಯಲು ಅವಕಾಶ ನೀಡಲಿಲ್ಲ.

ಆಮೇಲೆ ನಾನು ಆಗುಂಬೆ ಗಾಟ್ ಮೂಲಕ "ಆಗುಂಬೆ"ಯತ್ತ ಮುನ್ನಡೆದೆವು....ಅಲ್ಲಿನ ಸುತ್ತಮುತ್ತಲಿನ ಬೆಟ್ಟ, ಕಾಡು, ಎತ್ತ ನೋಡಿದರೂ ಹಸಿರು ನಿಜವಾಗಿಯೂ ಬಲು ಮೋಹಕವಾಗಿತ್ತು. ನಾವು ಆಗುಂಬೆ ತಲುಪುವಷ್ಟರಲ್ಲಿ ತುಂತುರು ಮಳೆ ಸುರುವಾಯಿತು. ಆಮೇಲೆ ನಾವು ಆಗುಂಬೆ ತಲುಪಿದಾಗ......ದಟ್ಟ ಮಂಜು, ತುಂತುರು ಮಳೆ









ನಾವು ಅಲ್ಲಿ ಕೆಲವೊಂದು ಫೋಟೋಗಳನ್ನು ಕ್ಲಿಕ್ಕಿಸಿ ಸ್ವಲ್ಪ ಹೊತ್ತು ಸಮಯ ಕಳೆದು "ಶೃಂಗೇರಿ"ಯತ್ತ ಹೊರಟೆವು.

ನಾವು ಶೃಂಗೇರಿಯಲ್ಲಿ ದೇವರ ದರ್ಶನ ಮಾಡಿ, ಸ್ವಲ್ಪ ಹೊತ್ತು ಅಲ್ಲೇ ಸುತ್ತಾಡಿ ಕಾಲ ಕಳೆದು









"ಕುದುರೆ ಮುಖ" ಮೂಲಕ "ಹೊರನಾಡಿ"ಗೆ ಹೊರಟೆವು. ಕೆಲವೊಂದು ಫೋಟೋಗಳು :

"ಕುದುರೆಮುಖ" ಮಾತ್ರ ಸೂಪರ್....... ನೀವೇ ನೋಡಿ :





































ನಾವು "ಹೊರನಾಡು" ತಲುಪಿದಾಗ ಸಂಜೆಯಾಗಿತ್ತು....ನಂತರ ನಾವು ಅಲ್ಲಿ ದೇವರ ದರ್ಶನ ಮಾಡಿ,



ಅಲ್ಲೇ ಊಟ ಕೂಡ ಮಾಡಿ ಅಲ್ಲಿಂದ "ಧರ್ಮಸ್ಥಳ"ಕ್ಕೆ ಹೊರಟೆವು.

ನಂತರ ನಾವು ಬೆಳಿಗ್ಗೆ "ನೇತ್ರಾವತಿ"ಯಲ್ಲಿ ಮಿಂದು ಧರ್ಮಸ್ಥಳದಲ್ಲಿ ಪೂಜೆ ಮಾಡಿಸಿ, ಹಳೆ ವಸ್ತುಗಳ ಸಂಗ್ರಹಾಲಯಕ್ಕೆ ಬೇಟಿ ನೀಡಿ, ಅಲ್ಲೇ ಊಟ ಮಾಡಿ ಅಲ್ಲಿಂದ "ಕುಕ್ಕೆ ಸುಭ್ರಮಣ್ಯ"ಕ್ಕೆ ಹೊರಟೆವು.

"ಕುಕ್ಕೆ ಸುಭ್ರಮಣ್ಯ"ದಲ್ಲಿ ದೇವರ ದರ್ಶನ ಮಾಡಿ......







ಅಲ್ಲೇ ಊಟ ಕೂಡ ಮುಗಿಸಿ ಸಿರಾಡಿ ಗಾಟ್ ಮೂಲಕ ಬೆಂಗಳೂರಿನತ್ತ ಹೊರಟೆವು.

ನಂತರ ಕನಕಪುರದ "ಚಿಕ್ಕ ಮುದವಾಡಿಯ" ಸಮೀಪ ಮಹೇಶನನ್ನು ಡ್ರಾಪ್ ಮಾಡಿ ನಂತರ "ಮಧುಸೂದನನನ್ನು" ಎಸ್.ಪಿ.ರೋಡ್ನಲ್ಲಿ ಡ್ರಾಪ್ ಮಾಡಿ, "ವಿಜಯ್, ಯಶವಂತ್ ಹಾಗೂ ಪವನ್"ರನ್ನು ಕತ್ರಿಗುಪ್ಪೆಯಲ್ಲಿ ಇಳಿಸಿ, ನಮ್ಮನೆಯತ್ತ ಹೊರಟು ಕೋಣನಕುಂಟೆಯಲ್ಲಿ ನನ್ನನ್ನು ಇಳಿಸಿ, ಡ್ರೈವರ್ ಅವನ ಮನೆಯತ್ತ ಹೊರಟ. ಆಗ ಸಮಯ ಸುಮಾರು ಹನ್ನೊಂದು ಘಂಟೆ ಇದ್ದಿರಬಹುದು.

ಇದೇ ನಮ್ಮ ಹನ್ನೆರಡದಿಮೂರು ದಿನಗಳ ದೊಡ್ಡ ಮರೆಯಲಾಗದಂತಹ ಪ್ರವಾಸದ ಒಂದು ಚಿಕ್ಕ "ಪ್ರವಾಸಿ ಕಥನ". ನಾವೆಂದೂ ಮರೆಯದಂತ ನಮ್ಮ ಟ್ರಿಪ್ ಈ "ಕರ್ನಾಟಕ - ಕೇರಳ - ತಮಿಳ್ನಾಡು" ಟ್ರಿಪ್.

ಇಂತಿ ನಿಮ್ಮ,
ವೆಂಕಟೇಶ್.ಜಿ